ಅಭಿಜಿತ್
	
ಲೈರಾಪುಂಜದ ಪ್ರಥಮನಕ್ಷತ್ರ (alpha-Lyra). ವೇಗ (Vega) ಇದರ ಪಾಶ್ಚಾತ್ಯನಾಮ. ಬರಿಗಣ್ಣಿಗೆ ಕಾಣುವ ಉಜ್ವಲನಕ್ಷತ್ರಗಳಲ್ಲಿ ಐದನೆಯದು (ಸೂರ್ಯ ಒಂದನೆಯದು); ನೈಜಕಾಂತಿಪ್ರಕಾರ ಏಳನೆಯದು. ದೂರ 26 ಜ್ಯೋತಿರ್ವರ್ಷಗಳು. ನೀಲಪ್ರಕಾಶದ ಈ ನಕ್ಷತ್ರ ಆಕಾಶದ ಉತ್ತರಾರ್ಧಗೋಳದಲ್ಲಿದೆ. ಧ್ರುವನಕ್ಷತ್ರ, ಅಭಿಜಿನ್ನಕ್ಷತ್ರ ಮತ್ತು ಇದಕ್ಕಿಂತ ಪಶ್ಚಿಮಕ್ಕಿರುವ ಸ್ವಾತಿ ನಕ್ಷತ್ರ ಒಂದು ಸಮಭುಜ ತ್ರಿಭುಜದ ಮೂರು ಶೃಂಗಗಳ ಸ್ಥಾನಗಳಲ್ಲಿವೆ. 'ಸೂರ್ಯ ಸೆಕೆಂಡಿಗೆ ಸುಮಾರು 30ಕಿ.ಮಿ ವೇಗದಿಂದ ಅಭಿಜಿನ್ನಕ್ಷತ್ರದ ದಿಕ್ಕಿನಲ್ಲಿ ಓಡುತ್ತಿದ್ದಾನೆಂದು ಖಗೋಳಜ್ಞರು ತೀಮಾನಿಸಿದ್ದಾರೆ. ಸೂರ್ಯನ ವಿಜಯಯಾತ್ರಾಭಿಮುಖವಾದ ದಿಕ್ಕಿನಲ್ಲಿರುವ ನಕ್ಷತ್ರಕ್ಕೆ ಕಡೆಯ ಪಕ್ಷ 3000 ವರ್ಷಗಳ ಹಿಂದೆಯೇ ಋಗ್ವೇದದ ಋಷಿಗಳು ಅಭಿಜಿತ್ ಎಂದು ನಾಮಕರಣ ಮಾಡಿದ್ದರು ಎಂದಿದ್ದಾರೆ ಪ್ರೊ. ಆರ್. ಎಲ್. ನರಸಿಂಹಯ್ಯನವರು.
(ನೋಡಿ- ಅಯನಾಂಶ)										

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ